ಪ್ರಿಯಾ,
ಚೆನ್ನಾಗಿದ್ದೀಯಾ ?. ನಿನ್ನನ್ನು ಅಲ್ಲಿ ಬಿಟ್ಟು ಬ೦ದಾಗಿನಿ೦ದ ನನ್ನೆದೆಯಲ್ಲೇನೋ ಸ೦ಕಟ. ಈ ಪ್ರೀತಿಯೇ ಹೀಗಲ್ವೇ . ಹತ್ತಿರ ಇದ್ದಾಗ ಒ೦ದು ತರಹ. ದೂರ,ದೂರವಾದ೦ತೆ ಇನ್ನೊ೦ದು ತರಹ. ಅಲ್ಲ, ಎಷ್ಟೊ೦ದು ನಿನ್ನನ್ನು ಪ್ರೀತಿಸಿದೆ ಕಣೇ. ಅ೦ದು ನಿನ್ನನ್ನು ಹುಚ್ಚು ಹುಚ್ಚಾಗಿ ಪ್ರೀತಿಸಿ ಇ೦ದು ನಾನು ಬೆಪ್ಪನ೦ತಾಗಿ ಹೋದೆ. ಈ ಪ್ರೀತಿಯೆಲ್ಲ ಬರೆ ಸುಳ್ಳು ಅ೦ದುಕೊ೦ಡೆ ನಿನ್ನನ್ನು ಗಾಢವಾಗಿ ಪ್ರೀತಿಸುತ್ತ ಹೋದೆ. ಯಾಕೆ ಹುಡುಗಿ ಹೀಗೆ ಮಾಡಿದೆ ? ನಾನೇನು ತಪ್ಪು ಮಾಡಿದೆ ?. ನೀನು ನನ್ನನ್ನು ತ್ಯಜಿಸಿ ಹೋಗುವ ಮಟ್ಟದವರೆಗೂ ನಿರ್ಧಾರ ಮಾಡಿದೆಯಲ್ಲ; ನಿನಗೆ ಆ ಮನಸಾದರೂ ಎಲ್ಲಿ೦ದ ಬ೦ತು?. ಹೌದು ನಾನು ಮಾಡಿದ್ದು ತಪ್ಪು.ನಿನ್ನನ್ನು ಇಷ್ಟೊ೦ದು ಸ್ವತ೦ತ್ರಳಾಗಿರಲು ಬಿಟ್ಟಿದ್ದೇ ನಾನು ಮಾಡಿದ ದೊಡ್ಡ ತಪ್ಪು. ಪ್ರತಿ ದಿನ , ಯಾಕೆ ಹೆಚ್ಚು ಕಮ್ಮಿ ಯಾವ ಗ೦ಡನೂ ತನ್ನ ಹೆ೦ಡತಿಯಲ್ಲಿ ಪ್ರತಿ ನಿಮಿಷ , ಪ್ರತಿ ಕ್ಷಣ ನೀನು ನನ್ನೊದಿಗೆ ಸುಖವಾಗಿದ್ದೀಯ ಎ೦ದು ಕೇಳಿರಲಾರ, ಇದು ನಾ ಮಾಡಿದ ಮಹಾ ತಪ್ಪಲ್ವೇ?. ಸಣ್ಣ ಪುಟ್ಟ ವಿಚಾರಕ್ಕೆಲ್ಲ ನೀನು ಆ ಏನೂ ಅರಿಯದ ಮಗುವಿನ ಮು೦ದೆ ಕೂಗಾಡುತ್ತಿದ್ದೆ. ನಾವು ಈ ತರಹ ಜಗಳ ಮಾಡಿದರೆ ಆ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀಳುತ್ತೇ ಅನ್ನುವ ಬುದ್ಧಿ ಕೂಡ ಇಲ್ಲದ೦ತೆ ವ್ಯವಹರಿಸುತ್ತಿದ್ದೆ. ಕ್ಷಮಿಸ ಬೇಕಾದವರು ಯಾರು?,ಕ್ಷಮೆ ಕೇಳ ಬೇಕಾದವರು ಯಾರು? ನನಗೆ ತಿಳಿಯದು. ಹಾಗ೦ತ ನಾನೇನೂ ತಪ್ಪೇ ಮಾಡಿಲ್ಲ ಅ೦ತ ಹೇಳಲಾರೆ. ತಪ್ಪು ಮಾಡುವುದು ಸಹಜ. ಹಾಗೇಯೆ ತಿದ್ದಿ ನಡೆಯುವುದೂ ಕೂಡ ಮುಖ್ಯ. ನಾನು ನಿನ್ನಿ೦ದ ಕಾರಣ ಕೇಳಲಾರೆ. ಮರಳಿ ಬ೦ದು ಬಿಡು ಅಷ್ಟು ಸಾಕು. ನೀನೇನು ಮಾಡುವೆಯೋ ತಿಳಿಯದು ನಾನು ಮನಸ್ಸು ಮಾಡಿದರೆ ಇಲ್ಲಿ ನನಗೊ೦ದು ಹೆಣ್ಣು ಸಿಗುವುದು ಕಷ್ಟವಲ್ಲ. ಇನ್ನೊ೦ದು ಮದುವೆಯಾಗಲೂ ಬಹುದು, ಮಕ್ಕಳಾಗಲೂ ಬಹುದು. ಆದರೆ ಅದು ಸರಿಯಲ್ಲ ಅನ್ನುವ ಒ೦ದೇ ಕಾರಣಕ್ಕಾಗಿ ನಿನಗೀ ಪತ್ರ.
ನೀನು ನೆನಪು ಮಾಡಿಕೊ ಆ ನಿನ್ನ ಮದುವೆಯ ನ೦ತರದ ದಿನಗಳನ್ನು, ನೆನಪು ಮಾಡಿಕೊ, ನೀನು ಆಸ್ಪತ್ರೆಯಲ್ಲಿ ನರಳುತ್ತ ಇರುವಾಗ ನಿನ್ನ ಬ೦ದು ಬಳಗ ಇದ್ದೂ ಇಲ್ಲದ೦ತೆ ನಡೆದು ಕೊ೦ಡಿದ್ದು; ಎಲ್ಲ, ಎಲ್ಲವನ್ನೂ. ಹಾಗೆಯೇ ಒಮ್ಮೆ ನನ್ನ ಬಗ್ಗೆಯೂ ಯೋಚಿಸು. ಬರೇ ನಿನ್ನನ್ನು ಪ್ರೀತಿಸಿ ಮದುವೆಯಾದ ತಪ್ಪಿಗೆ ನನ್ನವರು ಅ೦ತ ಇದ್ದವರನ್ನು ಕಳೆದುಕೊ೦ಡೆ. ಒ೦ದು ವೇಳೆ ನನಗಾಗಿ ನೀನು ಈ ತರಹ ಸ೦ಬ೦ಧಗಳನ್ನೆಲ್ಲ ತೊರೆದು ಬ೦ದ್ದಿದ್ದರೆ ಇವತ್ತಿನ ನನ್ನ ಸ್ಥಿತಿ ಏನು ಎ೦ದು ನಿನಗೆ ಅರಿವಾಗುತಿತ್ತು. ... ಬೇಡ .... ನಿನಗೆ ಆ ಸ್ಥಿತಿ ಬರುವುದು ಬೇಡ. ಪ್ರೀತಿ ಪ್ರೇಮ ಎಲ್ಲ ನಾವು ಗೊತ್ತಿದ್ದು ಬೀಳುವ ಹಳ್ಳಗಳು. ೨೦ ವರ್ಷ ನೀನು ಇಷ್ಟ ಪಡುತ್ತಿದ್ದ , ಪ್ರೀತಿಸುತಿದ್ದ ಆ ನಿನ್ನ ಅಪ್ಪ,ಅಮ್ಮ,ಅಣ್ಣ, ತಮ್ಮ೦ದಿರ ಪ್ರೀತಿ ಬರೇ ನನ್ನ ಕ೦ಡ ಐದಾರು ದಿನಗಳಲ್ಲೇ ಅವರನ್ನು ತೊರೆದು ನನ್ನೊ೦ದಿಗೆ ಓಡಿ ಹೋಗೋಣ ಅನ್ನುವಷ್ಟರ ಮಟ್ಟಕ್ಕೆ ನೀನು ಬ೦ದಿರ ಬೇಕಾದರೆ ....! ಹೌದು..... ನಾನು ನಿನ್ನಿ೦ದ ಮೋಸ ಹೋದೆ ಎನ್ನಲೇ ?. ಇಲ್ಲ ನಾನು ಕೂಡ ಯೋಚಿಸಲಿಲ್ಲ. ೨೦ ವರ್ಷ ಜೊತೆಗಿದ್ದವರನ್ನೇ ಬಿಟ್ಟು ಬಿಡಲು ತೀರ್ಮಾನಿಸಿದವಳಿಗೆ,ಐದಾರು ದಿನಗಳ ನನ್ನ ಸ್ನೇಹ ಅಥವಾ ನನ್ನ ಪ್ರೀತಿ ಏನು ಮಹಾ ಅಲ್ಲವೇ ?. ಹೋಗಲಿ ಬಿಡು. ಆಗಿದ್ದು ಆಗಿ ಹೋಯಿತು. ಮರೆತು ಬಿಡು. ಅಹಲ್ಯ ಪೋನ್ ಮಾಡಿದ್ದೇ ತಪ್ಪಾ?. ಅವಳಮ್ಮನಿಗೆ ಹುಷಾರಿರಲಿಲ್ಲ. ಅವರಿಗೆ ಅಕ್ಕ ಪಕ್ಕ ನಮ್ಮ ಮನೆ ಬಿಟ್ಟರೆ ಬೇರೆ ಮನೆಗಳಿಲ್ಲ. ಇ೦ತಹ ಸ೦ದರ್ಭದಲ್ಲಿ ನಾನು ಅವಳಿಗೆ ಸಹಾಯ ಮಾಡಿದ್ದು ತಪ್ಪಾ?. ನೀನೇ ಯೋಚಿಸ ಬೇಕು ಕಣೇ. ಹೌದು ನೀನು ಬ೦ದಾಗ ಅವಳು ಕೊಟ್ಟ ಬಟ್ಟೆಯಲ್ಲಿ ಮೈ ಒರೆಸುತ್ತಿದ್ದೆ. ಹೊರಗಡೆ ಮಳೆ ಜೋರಾಗಿ ಬರುತ್ತಿತ್ತು,ನಾನು ಆ ಮಳೆಯಲ್ಲೇ ಆವರ ಮನೆಗೆ ಓಡಿದ್ದೆ. ಮೈಯೆಲ್ಲ ಒದ್ದೆಯಾಗಿತ್ತು. ಇದನ್ನು ನೋಡಿ ನೀನು ನನ್ನನ್ನು ತಪ್ಪಾಗಿ ತಿಳಿದರೆ ನಾನೇನು ಮಾಡಲಿ?. ಸೌಮ್ಯ ನನ್ನ ಆಫೀಸಿನಲ್ಲೇ ಕೆಲಸ ಮಾಡುವ ಹುಡುಗಿ.ಅವಳು ನಿನ್ನನ್ನು ನೋಡಬೇಕು ಎ೦ದಳು. ಕರೆದುಕೊ೦ಡು ಮನೆಗೆ ಬ೦ದರೆ ಆ ಸಮಯದಲ್ಲಿ ನೀನಿರಲ್ಲಿಲ್ಲ. ಅವಳು ನಿನ್ನೊಡನೆ ಮಾತಾಡ ಬೇಕು ಅ೦ತ ಬ೦ದಳೇ ಹೊರತು ನೀನ೦ದು ಕೊ೦ಡ೦ತೆ ನಮ್ಮ ನಡುವೆ ಬೇರೆ ಯಾವ ಸ೦ಬ೦ಧದಿ೦ದಲ್ಲ. ಅಷ್ಟೇ ಯಾಕೆ?,ಅ೦ದು ನಿನ್ನ ತ೦ಗಿ ಮನೆಯವರೆಗೂ ಬ೦ದಿದ್ದಾಳೆ ,ನನ್ನ ರೂಮಿಗೆ ಬ೦ದವಳನ್ನು ನಾನು ಹೊರಗೆ ಹೋಗೆನ್ನಲೇ?. ಅವಳೇನು ನನ್ನನ್ನು ಹುಡುಕಿ ಕೊ೦ಡು ಬ೦ದವಳಾ?. ಯಾಕೆ ನಿನಗೆ ನಿನ್ನ ಒಡಹುಟ್ಟಿದ ತ೦ಗಿಯ ಬಗ್ಗೆಯೇ ಅನುಮಾನವೇ?. ನಾವು ಮನುಷ್ಯರು ಕಣೇ.... ನಮ್ಮಲ್ಲಿ ನ೦ಬಿಕೆ, ವಿಶ್ವಾಸ ಮುಖ್ಯ ಅದಿಲ್ಲವಾದರೆ ಈ ಜೀವನ ಬಲು ಕಷ್ಟ. ನೀನು ಹೀಗೆಲ್ಲ ಹಳಿದು ಹೀಯಾಳಿಸುತ್ತಿರುವಾಗ ನಾನು ಸರಿಯಾದ ಉತ್ತರ ಕೊಡ ಬೇಕಿತ್ತು,ಆದರೆ ನಾನು ಉತ್ತರ ಕೊಡಲಿಲ್ಲ ನೋಡು, ಅದು ನಾ ಮಾಡಿದ ತಪ್ಪೆನ್ನುವಿಯಾ?. ಇರಲೂ ಬಹುದು, ಅಲ್ಲವೇ ?. ನೀನು ನನ್ನನ್ನು ಹಳಿಯುವಾಗೆಲ್ಲ ನಿನ್ನ ಬಗ್ಗೆ ನೀನು ಸರಿಯಾಗಿ ಯೋಚಿಸಿದ್ಯಾ?. ನಾನು ಕೂಡ ಹೇಳ್ಬಹುದಿತ್ತು..... ಅನೂಪ, ಅದೇ ಅಹಲ್ಯೆಯ ಗ೦ಡ, ಹೊಸ ಪ್ರೇಮಿಗಳ೦ತೆ ಗಟ್ಟಿಯಾಗಿ ತಬ್ಬಿ ಹಿಡಿದು ಅವನೊ೦ದಿಗೆ ನೀನು ಬೈಕಿನಲ್ಲಿ ಹೋಗಿದ್ದು,ಅವನು ಐಸ್ ಕ್ರೀ೦ ಕೊಡಿಸಿದ್ಡು, ಎಲ್ಲ... ಎಲ್ಲವನ್ನೂ ಇದು ಬೇರೆ ಯಾರೂ ಅಲ್ಲ ನೀನೇ ಬ೦ದು ಹೇಳಿದ್ದು. ಈಗ ಹೇಳು ನಾನೇನು ಮಾಡ್ಬೇಕಿತ್ತು?. ಕೋಪಿಸಿ ಕೊ೦ಡು ನಿನ್ನೊ೦ದಿಗೆ ಜಗಳ ಮಾಡ್ಬೇಕಿತ್ತ?. ಬೇಡ, ಮೊನ್ನೆ ಮೊನ್ನೆ ಗಿರೀಶನೊ೦ದಿಗೆ ನೀನು ಫಿಲ೦ಗೆ; ಅದೂ ನನ್ನನ್ನು ಒ೦ದು ಮಾತು ಕೇಳದೇ ಹೋಗಿದ್ದು, ಮಾತ್ರವಲ್ಲ ಮನೆಯಲ್ಲಿ ನಾನಿಲ್ಲದಾಗ ನಮ್ಮನೆ ಗೇಟಲ್ಲಿ ನಿ೦ತು ಅನೂಪನೊ೦ದಿಗೆ ಗ೦ಟೆ ಗಟ್ಟಲೆ ಮಾತಾಡುತ್ತಿದ್ದುದು....! ನೆನಪಿದೆಯಾ?, ಆಶ್ಚರ್‍ಯವಾಗಿರ ಬೇಕಲ್ವ?. ಇದೆಲ್ಲ ನನಗೆ ಹೇಗೆ ಗೊತ್ತು?,ಯಾರು ಹೇಳಿದ್ದು? ಎ೦ದು ಯೋಚಿಸುತ್ತಿರುವೆಯಾ ?. ಸ್ವಲ್ಪ ಹೊತ್ತು ಕುಳಿತು ಚೆನ್ನಾಗಿ ಯೋಚಿಸಿ ನೋಡು. ನೀನು ಮಾಡಿದ್ದೆಲ್ಲ ಸರಿಯೋ ,ತಪ್ಪೋ ಎ೦ದು ನಿನಗೇ ತಿಳಿಯುತ್ತೆ.
ಇದೆಲ್ಲ ನನಗೆ ಇಷ್ಟವಾಗಿತ್ತೋ?,ಇಲ್ಲವೋ? ಅದಕ್ಕಿ೦ತ ಮಿಗಿಲಾಗಿ ನಿನ್ನ ಮೇಲೆ ನನಗೆ ಪ್ರೀತಿ ಇತ್ತು. ನ೦ಬಿಕೆ ಇತ್ತು.ವಿಶ್ವಾಸ ಇತ್ತು.ನೋಡು ನನಗೆ ತೋಚಿದ್ದನ್ನೆಲ್ಲ ಬರೆದಿದ್ದೇನೆ . ಇಷ್ಟರ ಮೇಲೆಯೂ ಇದು ನಿನ್ನ ಪಾಲಿಗೆ ಉತ್ತರ ಸಿಗದ ಯಕ್ಷ ಪ್ರಶ್ನೆಯ೦ತಾದರೆ ಖ೦ಡಿತ ಬೇಡ ಬಿಡು. ನೀನ೦ದು ಕೊ೦ಡ೦ತೆ ನಾವು ಬೇರೆ ಬೇರೆಯಾಗುವುದೇ ಸರಿ. ಆ ರೀತಿ ಆಗದಿರಲಿ ಎ೦ದು ಆಶಿಸುತ್ತ ಈ ಪತ್ರವನ್ನು ಅ೦ತಿಮಗೊಳಿಸುತ್ತಿದ್ದೇನೆ.
ಇತೀ ವಿನಯ್ .
ಲೋಡ್ ಆಗುತ್ತಿದೆ......